ಈ ಹೆಸರಿನ ಅನೇಕ ರಾಜರಿದ್ದಾರೆ. ಇವರಲ್ಲಿ ಮುಖ್ಯರಾದ ಕೆಲವರನ್ನು ಕುರಿತ ವಿವರಗಳನ್ನು ಈ ಮುಂದೆ ಕೊಡಲಾಗಿದೆ:
ಲೂಯಿ I: 778-840. ಬೃಹತ್ ಯುರೋಪಿನ ಪ್ರಸಿದ್ಧ ಸಾಮ್ರಾಟ. ಇವನು ಫ್ರಾನ್ಸಿನ ಚಾಸೆನ್ಸೂಯಿಲ್‍ನಲ್ಲಿ 778ರಲ್ಲಿ ಜನಿಸಿದ. ಇವನು ಫಿಯಸ್ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗಿದ್ದ. ಇವನ ತಂದೆ ಪಾರ್ಲಿಮೇನ್ ಚಕ್ರವರ್ತಿ. ತನ್ನ ತಂದೆಯ ಆಡಳಿತಾನಂತರ ಸಿಂಹಾಸನದ ಬೆನ್ನಟ್ಟಿ, ಆಂತರಿಕ ಕಲಹದಲ್ಲಿ ಜಯಪಡೆದು ಸಾಮ್ರಾಟನಾದ (814). ಇವನು ಯುದ್ಧಗಳ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಫ್ರಾನ್ಸ್, ಜರ್ಮನಿ, ಇಟಲಿ ಮುಂತಾದ ಪ್ರದೇಶಗಳು ಇವನ ಅಧೀನಕ್ಕೊಳಪಟ್ಟವು. ಇವನ ಕಾಲದಲ್ಲಿ ನಡೆದ ಅನೇಕ ದಂಗೆಗಳನ್ನು ಹತ್ತಿಕ್ಕಿದೆ. ಇವನ ಸಾಮ್ರಾಜ್ಯ ದಕ್ಷಿಣ ಯುರೋಪಿನವರೆಗೂ ವ್ಯಾಪಿಸಿತು. ಇವನು 840ರಲ್ಲಿ ನಿಧನ ಹೊಂದಿದ.

	ಪವಿತ್ರ ರೋಮನ್ ಸಾಮ್ರಾಜ್ಯದಿಂದ ಫ್ರಾನ್ಸ್ ಬೇರೆಯಾಗಿ ತನ್ನದೇ ಆದ ಆಡಳಿತ ಪಡೆದುಕೊಂಡ ಅನಂತರ ಲೂಯಿ ಎಂಬ ಹೆಸರಿನ 18 ಜನ ರಾಜರು ಫ್ರಾನ್ಸ್‍ನಲ್ಲಿ ಆಡಳಿತ ನಡೆಸಿದರು. ಆ ಪರಂಪರೆಗೂ  814-40ರ ವರೆಗೆ ಪವಿತ್ರ ರೋಮನ್ ಸಾಮ್ರಾಜ್ಯ ಆಳಿದ ಲೂಯಿಯನ್ನೇ ಮೊದಲನೆಯ ಲೂಯಿ ಎಂದು ಪರಿಗಣಿಸಲಾಗಿದೆ. ಫ್ರಾನ್ಸ್ ಆಳಿದ ಲೂಯಿ II (846-79), ಲೂಯಿ III (863-82), ಲೂಯಿ IV (921-54), ಲೂಯಿ V(967-87), ಲೂಯಿ VI (1081-1137), ಲೂಯಿ VII (1121-80), ಲೂಯಿ VIII (1187-1226).

ಲೂಯಿ IX: 1214-70. ಫ್ರಾನ್ಸಿನ ಪ್ರಸಿದ್ಧ ರಾಜ. ಇವನು ಫ್ರಾನ್ಸಿನ ಪಾಯಿಸಿ ಎಂಬಲ್ಲಿ ಜನಿಸಿದ (1214). ತಂದೆ ಎಂಟನೆಯ ಲೂಯಿ, ತಾಯಿ ಬ್ಲಾಷ್ ಆಫ್ ಕ್ಯಾಸಿಲ್ನ. ಇವನು ‘ಸಂತ’ ಲೂಯಿ ಎಂದೇ ಫ್ರಾನ್ಸ್‍ನಲ್ಲಿ ಪ್ರಸಿದ್ಧನಾಗಿದ್ದಾನೆ. ಇವನು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಸಿಂಹಾಸನವೇರಿದ (1226). ಇವನು ಪ್ರಾಪ್ತವಯಸ್ಕನಾಗುವವರೆಗೂ ಇವನ ತಾಯಿಯೇ ಆಡಳಿತ ನೋಡಿಕೊಳ್ಳುತ್ತಿದ್ದಳು. ಅನಂತರ ಅಧಿಕಾರಕ್ಕೆ ಬಂದ ಇವನು ತನ್ನ ನೈತಿಕತೆಯ ಬೆಂಬಲದಿಂದಲೇ ಫ್ರಾನ್ಸಿನ ಜನರನ್ನು ಸಂಘಟಿಸಿದ. ಧಾರ್ಮಿಕ ಪ್ರವೃತ್ತಿ ಮತ್ತು ಸಾಹಸ ಪ್ರವೃತ್ತಿಯ ಮಿಶ್ರಣವಾಗಿದ್ದ ಇವನು ಸಮರ್ಥ ಹಾಗೂ ನಿಷ್ಪಕ್ಷಪಾತ ಸಾರ್ವಜನಿಕ ಆಡಳಿತ ಪದ್ಧತಿ ಮತ್ತು ನ್ಯಾಯಾಂಗ ಪದ್ಧತಿಯನ್ನು ಜಾರಿಗೆ ತಂದು, ಪ್ರಜೆಗಳ ಮೆಚ್ಚುಗೆ ಪಡೆದ. 13ನೆಯ ಶತಮಾನದ ಅಸಾಧಾರಣ ದೊರೆ ಎನಿಸಿಕೊಂಡ. ಮಧ್ಯಯುಗದ ಆದರ್ಶರಾಜ, ವೀರಯೋಧನೆಂದು ಹೆಸರು ಗಳಿಸಿದ. ಇವನು 1270ರಲ್ಲಿ ನಿಧನ ಹೊಂದಿದ.

ಲೂಯಿ XI: 1423-83. ಫ್ರಾನ್ಸಿನ ರಾಜ. ಇವನು ಫ್ರಾನ್ಸಿನ ಬೋರ್ಜೆಸ್‍ನಲ್ಲಿ ಜನಿಸಿದ (1423). ಇವನ ತಂದೆ ಏಳನೆಯ ಚಾಲ್ರ್ಸ್. ಇವನು ತಂದೆಯ ವಿರುದ್ಧ ಪಿತೂರಿ ನಡೆಸಿದ್ದರಿಂದ ಇವನನ್ನು 1446-56ರ ವರೆಗೆ ಗಡಿಪಾರು ಮಾಡಲಾಯಿತು. ಇವನು ಸಿಂಹಾಸನಕ್ಕೆ ಬಂದ ಅನಂತರ ಸರಳಸಜ್ಜನ ವ್ಯಕ್ತಿಯಾದ. ಮಹತ್ತ್ವಾಕಾಂಕ್ಷಿ, ಕುಶಲರಾಜಕಾರಣಿಯಾದ ಇವನು ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡು, ಸಾಮಂತರ ಪ್ರಭಾವವನ್ನು ಅಳಿಸಿ, ಸಮರ್ಥ ಮತ್ತು ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಜಾರಿಗೆತಂದ. ರಾಷ್ಟ್ರದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿ ಸಾಮ್ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ. ಇವನು ಯುದ್ಧಗಳ ಮೂಲಕ ಬರ್ಗಂಡಿ, ಪಿಕಾರ್ಡಿ, ಫ್ರಾನ್ಸಿನಕಾಮ್ಟೆ ಮತ್ತು ಆರ್ಟಾಯ್ ಪ್ರಾಂತ್ಯಗಳನ್ನು ತನ್ನ ಅಧೀನಕ್ಕೊಳಪಡಿಸಿದ. ಇವನು ಆಡಳಿತದಲ್ಲಿ ಕ್ರೂರನೀತಿಯನ್ನು ಅಳವಡಿಸಿ, ಹಿಂದಿನ ನ್ಯಾಯಾಡಳಿತವನ್ನು ತೊಡೆದು ಹಾಕಿ ಬಡಜನರಿಗೂ ನ್ಯಾಯಪಡೆಯುವ ವ್ಯವಸ್ಥೆ ಮಾಡಿದ. ಇವನ ಕಾಲದಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಗತಿ ಹೊಂದಿದ್ದವು. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಿದ. ಸ್ಪೈಡರ್ ಎಂದೇ ಪ್ರಸಿದ್ಧನಾಗಿದ್ದ ಇವನು 1483ರಲ್ಲಿ ನಿಧನ ಹೊಂದಿದ.

ಲೂಯಿ XII: 1462-1515. ಫ್ರಾನ್ಸಿನ ರಾಜ, ಇವನು ಫ್ರಾನ್ಸಿನ ಬ್ಲೊಯಿಸ್ ಎಂಬಲ್ಲಿ ಜನಿಸಿದ(1462). ಇವನು ತನ್ನ ದಾಯಾದಿ ರಾಜನಾದ 13ನೆಯ ಚಾಲ್ರ್ಸ್‍ನ ನಿಧಾನಾನಂತರ ಅಧಿಕಾರಕ್ಕೆ ಬಂದ. ಇವನು ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದ. ಈ ಹಿನ್ನಲೆಯಿಂದ ಇವನು ‘ಪ್ರಜೆಗಳ ತಂದೆ’ ಎಂದು ಪ್ರಸಿದ್ಧನಾಗಿದ್ದಾನೆ. ಇವನು ಪ್ರಜೆಗಳ ಕಲ್ಯಾಣಕ್ಕಾಗಿ ಕಡಿಮೆ ತೆರಿಗೆ ವಿಧಿಸಿದನಲ್ಲದೆ, ನ್ಯಾಯಾಂಗ ಕ್ಷೇತ್ರದಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ತಂದ, ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಿದನಲ್ಲದೆ, ಕೆಳವರ್ಗದ ನೋಬಲರನ್ನು ನ್ಯಾಯಾಧೀಶರಾಗಿ ನೇಮಿಸಿದ. ಇವನು ಅನುಸರಿಸಿದ ವಿದೇಶಾಂಗ ನೀತಿ ಯಶಸ್ವಿಯಾಗಲಿಲ್ಲ. ರಾಜ್ಯವಿಸ್ತರಣೆಯ ಹೆಬ್ಬಯಕೆಯಿಂದ ಇಟಲಿಯಲ್ಲಿ ಫ್ರೆಂಚ್ ಪ್ರಾಬಲ್ಯ ಬೆಳೆಸಲು ಪ್ರಯತ್ನಿಸಿ ವಿಫಲನಾದ. ಇವನು 1515ರಲ್ಲಿ ನಿಧನ ಹೊಂದಿದ.

ಲೂಯಿ XIII:1601-43. ಫ್ರಾನ್ಸಿನ ರಾಜ. ಇವನು ಫ್ರಾನ್ಸಿನ ಫೌಂಟೈನ್ ಬ್ಲಿವ್‍ನಲ್ಲಿ ಜನಿಸಿದ(1601). ತಂದೆ ನಾಲ್ಕನೆಯ ಹೆನ್ರಿ, ತಾಯಿ ಮೇರಿಡೆ ಮೆಡಿಸಿಸ್. ಇವನು ಬಾರ್ಬನ್‍ವಂಶದವನು. ತಂದೆ ನಾಲ್ಕನೆಯ ಹೆನ್ರಿ ಮೋಸದಿಂದ ಹತ್ಯೆಗೊಳಗಾದಾಗ ಇವನು 1610ರಲ್ಲಿ ಅಧಿಕಾರಕ್ಕೆ ಬಂದ. ಇವನು ಅಪ್ರಾಪ್ತವಯಸ್ಕನಾಗಿದ್ದರಿಂದ ರಾಜ್ಯದ ಆಡಳಿತವನ್ನು ಇವನ ಪರವಾಗಿ ತಾಯಿಯೇ ನೋಡಿಕೊಳ್ಳುತ್ತಿದ್ದಳು (1617). ಇವಳು ಅನುಸರಿಸಿದ ಅಸಮರ್ಥ ಹಾಗೂ ತಪ್ಪು ನೀತಿಗಳಿಂದಾಗಿ ಸಾಮ್ರಾಜ್ಯದಲ್ಲಿ ವಿಚ್ಛಿದ್ರಕಾರಕ ಶಕ್ತಿಗಳು ತಲೆ ಎತ್ತಿದವು. 1624 ಕಾರ್ಡಿನಲ್ ರಿಚೆಲ್ಯೂ ಅದೃಷ್ಟವಶಾತ್ ಇವನ ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡು, ದೇಶವನ್ನು ವಿಪತ್ತಿನಿಂದ ಪಾರುಮಾಡಿದ. ರಿಚಲ್ಯೂ ರಕ್ಷಣಾ ಮಂತ್ರಿಯಾಗಿದ್ದು, ಸಮರ್ಥನೀತಿಯನ್ನು ಅನುಸರಿಸಿದ. ಪ್ರಭುತ್ವ ವಿರೋಧಿಗಳನ್ನು ಹತ್ತಿಕ್ಕಿ, ಪ್ರಾಟೆಸ್ಟೆಂಟರ ದಂಗೆಗಳನ್ನು ಅಡಗಿಸಿ, ದೇಶದಲ್ಲಿ ತಲೆದೋರಿದ ಅರಾಜಕತೆಯನ್ನು ನಿರ್ಮೂಲನಗೊಳಿಸಿದ. ಇವನು ಸ್ಪೇನ್ ದೇಶದ ಹಬ್ಸ್‍ಬರ್ಗ್ ಕುಟುಂಬದ ವಿರುದ್ಧ ಯುದ್ಧ ಘೋಷಿಸಿದ(1635). ಈ ಯುದ್ಧ ಮೂವತ್ತು ವರ್ಷಗಳ ಕಾಲ ನಡೆಯಿತು(1618-48). ಇವನು ಯುದ್ಧ ಕೊನೆಗೊಳ್ಳುವ ಮೊದಲೇ ನಿಧನ ಹೊಂದಿದ(1643). ಅನಂತರ ಬಂದ ಇವನ ಮಗ 14ನೆಯ ಲೂಯಿ ಯಶಸ್ವಿಯಾದ.

	ಲೂಯಿ XIV: 1638-1715. ಫ್ರಾನ್ಸಿನ ರಾಜ. ಇವನು ಫ್ರಾನ್ಸಿನ ಸೆಂಟ್-ಜರ್ಮನಿ-ಎನ್-ಲಾಯ ಎಂಬಲ್ಲಿ ಜನಿಸಿದ(1638). ತಂದೆ 13ನೆಯ ಲೂಯಿ, ತಾಯಿ ಆನ್ನೆ(ಆನ್ನೆ ಆಫ್ ಆಸ್ಟ್ರಿಯ). ತಂದೆಯ ನಿಧನಾನಂತರ ಇವನು ಸಿಂಹಾಸನಕ್ಕೆ ಬಂದ. ಆಗ ಇವನಿಗೆ ಕೇವಲ 4ವರ್ಷಮಾತ್ರ. ಇವನು ಪ್ರಾಪ್ತವಯಸ್ಕನಾಗುವವರೆಗೂ ಇವನ ಪರವಾಗಿ ತಾಯಿ ಆಡಳಿತ ನೋಡಿಕೊಳ್ಳುತ್ತಿದ್ದಳು(1651). ಇವಳು ತನ್ನ ಮಗನ ಆಡಳಿತದ ಮೇಲೆ ಗಮನಾರ್ಹ ಪ್ರಭಾವ ಬೀರಿದಳು. ಕಾರ್ಡಿನಲ್ ಮ್ಯಾಜûರೀನ್ ಪ್ರಧಾನಮಂತ್ರಿ ಆಗಿ ನೇಮಕವಾದ. ಇವನು ದೇಶದಲ್ಲಿನ ಆಂತರಿಕ ದಂಗೆಗಳನ್ನು ಹತ್ತಿಕ್ಕಿ, ಪರಿಸ್ಥಿತಿಯನ್ನು ಹತೋಟಿಗೆ ತಂದನಲ್ಲದೆ ಪ್ರಭುತ್ವಕ್ಕೆ ಬಂದೊದಗಿದ ಆಪತ್ತನ್ನು ನಿವಾರಿಸಿದ. 14ನೆಯ ಲೂಯಿ 1661ರಲ್ಲಿ ಸಾಮ್ರಾಜ್ಯದ ಆಡಳಿತವನ್ನು ತಾನೇ ವಹಿಸಿಕೊಂಡ. 1661 ರಿಂದ 1715ರ ಅವಧಿಯಲ್ಲಿನ ಇವನ ಆಡಳಿತ ಮಹತ್ತ್ವಪೂರ್ಣ ಘಟನೆಗಳಿಂದ ಕೂಡಿತ್ತು. ಇವನು ಮಹಾಪ್ರಭು, ಸೂರ್ಯ ಪ್ರಭು ಎಂದೇ ಪ್ರಸಿದ್ಧನಾದ. ಇವನ ಆಳಿಕೆಯಲ್ಲಿ ಫ್ರಾನ್ಸ್ ಇಡೀ ಯುರೋಪಿನ ಮಾದರಿ ದೇಶವಾಯಿತು. ಫ್ರೆಂಚ್ ಸಾಹಿತ್ಯ, ಸಂಗೀತ, ಭಾಷೆ, ಸಂಸ್ಕøತಿ ಯುರೋಪಿನಲ್ಲಿ ಮನೆಮಾತಾಗಿದ್ದುವು. 1648ರ ವೆಸ್ಟ್‍ಫೇಲಿಯ ಹಾಗೂ 1659ರಲ್ಲಿ ಪಿರನೀಸ್ ಕರಾರನ್ನು ಒಪ್ಪಿಕೊಂಡು ಫ್ರಾನ್ಸಿನ ಸ್ಥಾನಮಾನವನ್ನು ಹೆಚ್ಚಿಸಿದ. ಯುರೋಪಿನ ಮೇಲೆ ಫ್ರಾನ್ಸ್ ಬೀರಿದ ಪ್ರಭಾವದಿಂದಾಗಿ ಇವನ ಆಡಳಿತದ ಅವಧಿಯನ್ನು ‘14ನೆಯ ಲೂಯಿ ಯುಗ’ ಎಂದು ಕರೆಯಲಾಗಿದೆ. ‘ನಾನೇ ರಾಜ್ಯ’ ಎಂದು ಘೋಷಿಸಿದ ಇವನು ಅತ್ಯಂತ ಸಮರ್ಪಕವಾಗಿ ಆಡಳಿತ ನಡೆಸಿದ. ಆಸ್ಟ್ರಿಯ ಹಾಗೂ ಸ್ಪೇನ್ ದೇಶಗಳ ಮೇಲೆ ತನ್ನ ಸಾರ್ವಭೌಮತ್ವ ಸಾಧಿಸುವುದಕ್ಕಾಗಿ ಫ್ರಾನ್ಸ್‍ನಲ್ಲಿ ದೀರ್ಘಕಾಲ ದಿಂದ ನಡೆಯುತ್ತಿದ್ದ ಮೂವತ್ತು ವರ್ಷಗಳ ಯುದ್ಧ ಇವನ ಕಾಲದಲ್ಲಿ ಮುಕ್ತಾಯಗೊಂಡಿತು. ಇವನು ಸ್ಪೇನಿನ ಮಾರಿಯ ಥೆರೇಸಳನ್ನು ವಿವಾಹವಾದ (1660). ಫ್ರಾನ್ಸ್‍ನ್ನು ಯುರೋಪಿನ ಬೃಹತ್ ರಾಷ್ಟ್ರವಾಗಿ ರೂಪಿಸಬೇಕೆಂಬುದು ಇವನ ಹೆಬ್ಬಯಕೆಯಾಗಿತ್ತು. ಇವನು ಸಮರ್ಪಕ ಹಾಗೂ ಸದೃಢ ಸರ್ಕಾರ ರಚಿಸಿ ಪರಿಣಾಮಕಾರಿ ಆಡಳಿತ ಪದ್ಧತಿಯನ್ನು ಜಾರಿಗೆ ತಂದಿದ್ದರಿಂದ, ಫ್ರಾನ್ಸ್ ಸಂಪದ್ಭರಿತ ರಾಷ್ಟ್ರವಾಯಿತು. ಇವನ ಕಾಲದಲ್ಲಿ ವರ್ಸೈಲ್ ಅರಮನೆ ನಿರ್ಮಾಣವಾಯಿತು. ದೊಡ್ಡ ದೊಡ್ಡ ಕಟ್ಟಡಗಳೂ ಕೋಲ್ಬರ್ಟ್ ಸಹಾಯದಿಂದ ಅನೇಕ ವಿದ್ಯಾಸಂಸ್ಥೆಗಳೂ ಸ್ಥಾಪನೆಯಾದವು. ಹೊಸ ಶೈಲಿಯ ಶಿಲ್ಪಕೆಲೆ ಪ್ರವರ್ಧಮಾನಕ್ಕೆ ಬಂತು. ಬರೆಹಗಾರರಿಗೆ, ಕಲಾವಿದರಿಗೆ, ವಿಜ್ಞಾನಿಗಳಿಗೆ ಈತ ಅಪಾರ ಪ್ರೋತ್ಸಾಹ ನೀಡಿದ. ವಿಜ್ಞಾನ ಮತ್ತು ಕಲೆಗಳ ಅಧ್ಯಯನಕ್ಕಾಗಿ ಕಾಲೇಜುಗಳನ್ನು ಖಗೋಳ ವೀಕ್ಷಣಕೇಂದ್ರಗಳನ್ನು ಸ್ಥಾಪಿಸಿದ. ಇವನ ಕಾಲವನ್ನು ಫ್ರೆಂಚ್ ಸಾಹಿತ್ಯದ ‘ಸುವರ್ಣಯುಗ’ವೆಂದು ಕರೆಯಲಾಗಿದೆ. ಅನಂತರ ದಕ್ಷಮಂತ್ರಿಗಳು ಸಾಧಿಸಿದ ಆರ್ಥಿಕ ದೃಢತೆಯನ್ನು ಇವನು ತನ್ನ ಅವಿವೇಕದ, ಸಂಕುಚಿತ ನೀತಿಯಿಂದಾಗಿ ನಾಶಮಾಡಿದ. ಪ್ರಾಟೆಸ್ಟೆಂಟರನ್ನು ಚಿತ್ರಹಿಂಸೆಗೆ ಗುರಿಪಡಿಸಿ, ಪ್ರಸಿದ್ಧ ನ್ಯಾಸ್ಟೀಸ್ ಶಾಸನವನ್ನು ರದ್ದುಗೊಳಿಸಿದ. ಇದರಿಂದ ಸಾವಿರಾರು ಪ್ರಾಟೆಸ್ಟೆಂಟ್‍ರು ಫ್ರಾನ್ಸ್‍ನ್ನು ತೊರೆದರು. ಇವನ ಕ್ರಮದಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. ಸಾಮ್ರಾಜ್ಯ ವಿಸ್ತರಣೆಗಾಗಿ ಇವನು ನಾಲ್ಕು ಯುದ್ಧಗಳನ್ನು ಮಾಡಿದ. ಈ ಯುದ್ಧಗಳಿಂದ ದೇಶದ ಆರ್ಥಿಕ ಮತ್ತು ಸೈನಿಕ ಶಕ್ತಿಗಳು ನಾಶವಾದವು. ಕೊನೆಕೊನೆಗೆ ಇವನು ಫ್ರಾನ್ಸಿನ ಪ್ರತಿಷ್ಠೆಯನ್ನು ಹೆಚ್ಚಿಸುವುದರ ಬದಲಾಗಿ ಅದರ ಪತನಕ್ಕೆ ಕಾರಣನಾದ. ಈತ ತನ್ನ ಕೊನೆಯ 30 ವರ್ಷಗಳ ಆಳಿಕೆಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಸ್ಪೇನಿನ ಸಿಂಹಾಸನಕ್ಕಾಗಿ ನಡೆದ ಯುದ್ಧ ಫ್ರಾನ್ಸ್‍ಗೆ ವಿನಾಶಕಾರಿಯಾಗಿತ್ತು. ಇದರ ಜೊತೆಗೆ ಇವನ ಮಗ ಮತ್ತು ಮೊಮ್ಮಗ ನಿಧನಹೊಂದಿದ್ದರಿಂದ ಆಘಾತಗೊಂಡ ಈತ 1715ರಲ್ಲಿ ನಿಧನನಾದ.

ಲೂಯಿ XV: 1710-74. ಫ್ರಾನ್ಸಿನ ರಾಜ. ಇವನು ಫ್ರಾನ್ಸಿನ ವರ್ಸೈಲ್ಸ್‍ನಲ್ಲಿ ಜನಿಸಿದ. 14ನೆಯ ಲೂಯಿಯ ಉತ್ತರಾಧಿಯಾಗಿ ಸಿಂಹಾಸನವೇರಿದ. ಇವನು ಅಸಮರ್ಥನೂ ಅವಿವೇಕಿಯೂ ಆಗಿದ್ದ. ಸಾಮ್ರಾಜ್ಯದ ಆಡಳಿತದ ಕಡೆ ಗಮನ ಹರಿಸದೆ ವಿಲಾಸ ಜೀವನದ ಕಡೆ ಹೆಚ್ಚು ಒಲವುಳ್ಳವನಾಗಿದ್ದ. ನೃತ್ಯ, ಬೇಟೆ, ಸುಂದರಿಯರ ಸಹವಾಸದಲ್ಲಿ ಕಾಲಕಳೆಯುತ್ತಿದ್ದ. ಅನೇಕ ಉಪಪತ್ನಿಯನ್ನು ಹೊಂದಿದ್ದ ಇವನು ರಾಣಿಯರ ಪ್ರಭಾವದಿಂದ ಸಾಮ್ರಾಜ್ಯದ ಪ್ರಗತಿಯನ್ನು ಕಡೆಗಣಿಸಿದ. ಇವನು ಪೋಲೆಂಡಿನ ರಾಜ ಸ್ಟುನಿಸ್ಲಸ್‍ನ ಮಗಳು ಮರಿಯ ಲೆಸಾನ್ಕಳನ್ನು ವಿವಾಹವಾದ(1725). ಇವನ ಉಪಪತ್ನಿಯರಲ್ಲಿ ಪ್ರಮುಖರಾದವರು ಮೇಡಂಡೆ ಪೊಂಪಾಡೆಂರ್ ಹಾಗೂ ಮೇಡಂ ಲ ಡೂ ಬರ್ರಿ. ಇಬ್ಬರು ರಾಣಿಯರ ಕೆಟ್ಟ ಪ್ರಭಾವಕ್ಕೊಳಗಾಗಿ ರಾಷ್ಟ್ರ ಮತ್ತು ಪ್ರಜೆಗಳ ಹಿತಾಸಕ್ತಿಗಳನ್ನು ಕಡೆಗಣಿಸಿದ. ಇವನ ಆಡಳಿತಾವಧಿಯಲ್ಲಿ ಪೆÇೀಲಿಷ್ ಉತ್ತರಾಧಿಕಾರ ಯುದ್ಧ, ಆಸ್ಟ್ರಿಯನ್ ಉತ್ತರಾಧಿಕಾರಯುದ್ಧ ಹಾಗೂ ಸಪ್ತವಾರ್ಷಿಕ ಯುದ್ಧಗಳು ಸಂಭವಿಸಿದವು. ಈ ಯುದ್ಧಗಳಲ್ಲಿ ಫ್ರಾನ್ಸ್ ಭಾಗವಹಿಸಿದ್ದ ರಿಂದಾಗಿ ಸಾಮ್ರಾಜ್ಯದ ಬೊಕ್ಕಸ ಬರಿದಾಗಿ ಫ್ರಾನ್ಸ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಈ ಸ್ಥಿತಿ ಮುಂದೆ ನಡೆದ ಫ್ರಾನ್ಸಿನ ಮಹಾಕ್ರಾಂತಿಗೆ ಬೀಜಾಂಕುರವಾಯಿತು. ಇವನು 1774ರಲ್ಲಿ ನಿಧನ ಹೊಂದಿದ.

ಲೂಯಿ XVI: 1754-93 ಫ್ರಾನ್ಸಿನ ರಾಜ ಹಾಗೂ 15ನೆಯ ಲೂಯಿಯ ಮೊಮ್ಮಗ. ಇವನು ಫ್ರಾನ್ಸಿನ ವರ್ಸೈಲ್ಸ್‍ನಲ್ಲಿ ಜನಿಸಿದ(1754). 15ನೆಯ ಲೂಯಿ ಅನಂತರ ಅನಿರೀಕ್ಷಿತವಾಗಿ ಸಂಭವಿಸಿದ ಹಿರಿಯ ರಾಜಕುಮಾರರ ನಿಧನದಿಂದ ತೆರವಾದ ಸಿಂಹಾಸನಕ್ಕೆ ಇವನು ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ(1774). ಇವನು ಅಧಿಕಾರಕ್ಕೆ ಬಂದಾಗ ಕೇವಲ 20 ವರ್ಷ ಹಾಗೂ ಇವನ ರಾಣಿ ಮೇರಿ ಆಂಟಾಯ್ನೆಟ್ಟಳಿಗೆ 19 ವರ್ಷ. ಅನಿರೀಕ್ಷಿತವಾಗಿ ಬಂದ ಸಿಂಹಾಸನಾಧಿಕಾರವನ್ನು ವಹಿಸಿ ಕೊಳ್ಳುವಾಗ “ನಾವು ಎಷ್ಟೊಂದು ಅಸಂತುಷ್ಟರು! ದೇಶವನ್ನಾಳಲು ನಾವು ತೀರಾ ಚಿಕ್ಕವರಿದ್ದೇವೆ” ಎಂದು ಉದ್ಗರಿಸಿದ್ದ. ಇವನಿಗೆ ಆಡಳಿತದಲ್ಲಿ ಅನುಭವವಿರಲಿಲ್ಲ. ಸ್ವಭಾವತಃ ಒಳ್ಳೆಯವನೂ ಸದುದ್ದೇಶಪೂರಿತನೂ ಸೈನಿಕ ಮೌಲ್ಯ ಮತ್ತು ಕರ್ತವ್ಯನಿಷ್ಠನೂ ಆಗಿದ್ದ. ಆದರೆ ರಾಜನಿಗಿರ ಬೇಕಾದ ದೃಢಮನೋಭಾವ, ಚಾಕಚಕ್ಯತೆ, ಆಡಳಿತಾನುಭವ ಇರಲಿಲ್ಲ. ಇವನಿಗೆ ಆಡಳಿತಕ್ಕಿಂತ ಸ್ವತಂತ್ರ ಜೀವನವೇ ಪ್ರಿಯವಾಗಿತ್ತು. ಸಂಕೋಚ ಸ್ವಭಾವ ಮತ್ತು ಚಂಚಲ ಪ್ರವೃತ್ತಿಯ ವ್ಯಕ್ತಿಯಾಗಿದ್ದು, ಜನರನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವಿರಲಿಲ್ಲ. ತನ್ನ ನೆಚ್ಚಿನ ರಾಣಿ ಮೇರಿ ಆಂಟಾಯ್ನೆಟ್ಟಳ ಪ್ರಭಾವಕ್ಕೆ ಒಳಗಾಗಿದ್ದ. ಆಸ್ಟ್ರಿಯದ ಮಹಾರಾಣಿ ಮರಿಯ ಥೆರೇಸಳ ಮಗಳಾದ ಇವಳನ್ನು ಫ್ರಾನ್ಸ್ ಮತ್ತು ಆಸ್ಟ್ರಿಯದ ನಡುವಿನ ವೈರತ್ವನ್ನು ಕೊನೆಗೊಳಿಸಿ ಸ್ನೇಹವರ್ಧನೆಗಾಗಿ ವಿವಾಹ ಮಾಡಿಕೊಡಲಾಯಿತು. ಆದರೆ ಫ್ರಾನ್ಸ ಜನತೆಯ ವಿಶ್ವಾಸ ಗಳಿಸುವಲ್ಲಿ ವಿಫಲಳಾಗಿ, ತೀಕ್ಷ್ಣಟೀಕೆಗೂ ಗುರಿಯಾಗಿದ್ದಳು. ಇವನು ತನ್ನ ಸಾಮ್ರಾಜ್ಯದ ಅರ್ಥವ್ಯವಸ್ಥೆ ನಿರ್ವಹಣೆಗೆ ಟರ್ಗೋಟ್, ನೆಕ್ಕರ್, ಕ್ಯಾಲೋನ್ ಎಂಬ ದಕ್ಷರನ್ನು ನೇಮಿಸಿಕೊಂಡಿದ್ದರೂ ರಾಣಿಯ ಹಾಗೂ ರಾಜನ ಸಂಬಂಧಿಗಳ ಪಿತೂರಿಯಿಂದ ಇವರನ್ನು ಆಗಾಗ ಬದಲಿಸುವ ಪರಿಪಾಠವಿದ್ದಿತ್ತು. ಇದರಿಂದ ಸಾಮ್ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಇವನ ಆಡಳಿತಾವಧಿಯ ಪ್ರಮುಖ ಘಟನೆಯೆಂದರೆ, 1789ರ ಫ್ರೆಂಚ್‍ಕ್ರಾಂತಿ. ಇದು ಪ್ರಪಂಚದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಸಾಮಾಜಿಕ ವಿಪ್ಲವವೂ ಹೌದು, ರಾಜಕೀಯ ಕ್ರಾಂತಿಯೂ ಹೌದು. ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಬೇರು ಬಿಟ್ಟಿದ್ದ ಲೋಪದೋಷ ಗಳಿಂದಾಗಿ ಕ್ರಾಂತಿ ಸಂಭವಿಸಿತು.

ಅಮೆರಿಕ ಕ್ರಾಂತಿಯಲ್ಲಿ ಇವನು ತೆಗೆದುಕೊಂಡ ತೀರ್ಮಾನ ಹದಿನಾಲ್ಕು ಹಾಗೂ ಹದಿನೈದನೆಯ ಲೂಯಿಯ ಕಾಲದಿಂದಲೂ ಮುಂದುವರಿದು ಬಂದ ವಿಪರೀತ ಸಾಲ, ಅಪಾರ ಹಾಗೂ ಅನಿಯಂತ್ರಿತ ಸರ್ಕಾರಿ ವೆಚ್ಚ ಹಾಗೂ ಅರಮನೆಯ ದುಂದುವೆಚ್ಚ ಇವೆಲ್ಲ ದೇಶದ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿದವು; ದೇಶದ ದಿವಾಳಿಯ ಮುನ್ಸೂಚನೆಗಳಾದವು. ಈ ಕೊರತೆಗಳನ್ನು ಸರಿದೂಗಿಸಲು ಈತ ಪ್ರಜೆಗಳ ಮೇಲೆ ಅಧಿಕ ತೆರಿಗೆ ವಿಧಿಸಿದ. ಇದರಿಂದ ಪ್ರಜೆಗಳು ಅತೃಪ್ತಿಗೊಂಡರೂ ಇದೇ ಕ್ರಾಂತಿಗೆ ಮೂಲವಾಗಿ ಪರಿಣಮಿಸಿತು. ಕ್ರಾಂತಿ ಎರಡು ಹಂತಗಳಲ್ಲಿ ಸಂಭವಿಸಿತು. 1789ರ ಮೊದಲ ಕ್ರಾಂತಿಯಿಂದ ನಿರಂಕುಶ ಪ್ರಭುತ್ವ, ಅಸಮಾನತೆ, ಅಸಹಿಷ್ಣುತೆ ಮುಂತಾದ ಕೆಟ್ಟ ಪದ್ಧತಿಗಳನ್ನು ಕಿತ್ತೊಗೆಯಲಾಯಿತಾದರೂ ಫ್ರಾನ್ಸಿನ ಜನತೆ ರಾಜಪ್ರಭುತ್ವವನ್ನು ಉಳಿಸಿಕೊಂಡರು. 1793ರಲ್ಲಿ ಸಂಭವಿಸಿದ ಎರಡನೆಯ ಹಂತದ ಕ್ರಾಂತಿ ಹೆಚ್ಚು ಮಹತ್ತ್ವದ್ದು. ಇದರಿಂದ ಫ್ರಾನ್ಸಿನಲ್ಲಿ ರಾಜಪ್ರಭುತ್ವ ರದ್ದಾಗಿ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿಸಲಾಯಿತು.

	ಇಂತಹ ವಿಷಮ ಸಮಯದಲ್ಲಿ ಅನೇಕ ವರ್ಷಗಳಿಂದಲೂ ಸೇರದಿದ್ದ ಸ್ಟೇಟ್ಸ್‍ಜನರಲ್ ಸಭೆ 1789 ಮೇ 5 ರಂದು ವರ್ಸೈಲ್ಸ್‍ನಲ್ಲಿ ಸೇರಿತು. 175 ವರ್ಷಗಳಿಂದ ಸೇರದಿದ್ದ ಈ ಸಭೆಯ ಅಧಿವೇಶನದಲ್ಲಿ ಫ್ರಾನ್ಸಿನ ಜನತೆ ಮಹತ್ತರ ಆಶೋತ್ತರಗಳನ್ನು ಇಟ್ಟಕೊಂಡಿದ್ದರು. ಆದರೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಜನ ದಂಗೆ ಎದ್ದು ಮಹಾಕ್ರಾಂತಿಗೆ ನಾಂದಿಹಾಡಿದರು(1789 ಜುಲೈ 14). ಬಾಸ್ಟ್ಯೆಲ್ ಕಾರಾಗೃಹವನ್ನು ಧ್ವಂಸ ಮಾಡಿ, ವರ್ಸೈಲ್ಸ್‍ನಲ್ಲಿದ್ದ ರಾಜನನ್ನು ಖೈದಿಯಂತೆ ಪ್ಯಾರಿಸ್‍ಗೆ ಕರೆತಂದು, ದೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿ ಅನುಸರಿಸಬೇಕೆಂದು ಆಗ್ರಹಿಸಿದರು(1791 ಜೂನ್). ಇದಕ್ಕೆ ರಾಜ ಒಪ್ಪದಿದ್ದಾಗ 1793 ಜನವರಿ 21 ರಂದು ಇವನನ್ನು ಗಿಲೋಟಿನ್ ಯಂತ್ರಕ್ಕೆ ಒಪ್ಪಿ ಶಿರಚ್ಛೇದನಗೊಳಿಸಲಾಯಿತು.	

(ಕೆ.ಪಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ